    ಮೂಲದೊಡನೆ ಪರಿಶೀಲಿಸಿ

ಕೃತಕ ಬಣ್ಣ ಹಾಕುವಿಕೆ

ವಿವಿಧ ಬಣ್ಣಗಳನ್ನು ಸಂಶ್ಲೇಷಿಸುವ ಹಾಗೂ ಅವನ್ನು ಬಟ್ಟೆಗಳಿಗೆ ಹಾಕುವ ವಿಧಾನ. 19ನೆಯ ಶತಮಾನದವರೆಗೂ ನಿಸರ್ಗದತ್ತ ಬಣ್ಣಗಳನ್ನೇ ಬಟ್ಟೆಗಳಿಗೆ ಹಾಕುತ್ತಿದ್ದರು. ಈ ಬಣ್ಣಗಳು ಸಸ್ಯ, ಪ್ರಾಣಿ ಅಥವಾ ಖನಿಜ ವರ್ಗಕ್ಕೆ ಸೇರಿದವು. 1856ರಲ್ಲಿ ಪರ್ಕಿನ್ ಎಂಬಾತ ಮೊದಲನೆಯ ಕೃತಕ ಬಣ್ಣವನ್ನು ಸಂಶ್ಲೇಷಿಸಿದ. ಅಲ್ಲಿಂದ ಮುಂದೆ ರಸಾಯನ ವಿಜ್ಞಾನಿಗಳು ನಾನಾ ಬಗೆಯವನ್ನು ಸಂಶ್ಲೇಷಿಸಿದ್ದಾರೆ. ಈಗ ಸಹಸ್ರಾರು ಕೃತಕ ಬಣ್ಣಗಳು ಉಪಯೋಗದಲ್ಲಿವೆ. ಇವನ್ನು ಆಗ್ರ್ಯಾನಿಕ್ ರಸಾಯನ ವಸ್ತುಗಳ ಸಂಯೋಗದಿಂದ ತಯಾರಿಸುವರು. ಕೃತಕ ಬಣ್ಣಗಳು ಹೆಚ್ಚಿದಂತೆ ಪ್ರಾಕೃತಿಕ ಬಣ್ಣಗಳ ಪ್ರಾಮುಖ್ಯ ಕಡಿಮೆಯಾಯಿತು. ಕೃತಕ ಬಣ್ಣಗಳ ಉಜ್ವಲತೆಯೂ ಛಾಯಾವೈವಿಧ್ಯವೂ ಇದರ ಕಾರಣಗಳು. ಇವುಗಳ ಉಪಯೋಗ ಸುಲಭ, ಕ್ಷಿಪ್ರ ಮತ್ತು ಪರಿಣಾಮಕಾರಿ. ಯಂತ್ರಗಳ ವ್ಯಾಪಕ ಬಳಕೆಯಿಂದ ಹತ್ತಿ, ಉಣ್ಣೆ, ರೇಷ್ಮೆಯಿಂದ ತಯಾರಾದ ನೂಲು ಮತ್ತು ಬಟ್ಟೆಗಳ ಮೇಲೆ ಸುಲಭವಾಗಿ ಸ್ಥಿರವರ್ಣಮೂಡುವಂತೆ ಕೃತಕ ಬಣ್ಣಗಳ ಬಳಕೆ ಸಾಧ್ಯ. ವಸ್ತ್ರಗಳ ಮೇಲೆ ಉಪಯೋಗಿಸುವ ಬಣ್ಣಗಳನ್ನು ಕೃತಕ ಬಣ್ಣಗಳ ತಯಾರಿಕೆಯ ದೃಷ್ಟಿಯಿಂದ ಮತ್ತು ಬಣ್ಣಹಾಕುವಿಕೆಯ ದೃಷ್ಟಿಯಿಂದ ಪರಿಶೀಲಿಸಬಹುದು. 

ವಸ್ತ್ರೋಪಯೋಗಿಕ ಬಣ್ಣಗಳನ್ನು ಪ್ರಯೋಗ ದೃಷ್ಟಿಯಿಂದ ಇಲ್ಲಿ ಮುಂದೆ ಸೂಚಿಸಿರುವಂತೆ 9 ಗುಂಪುಗಳಾಗಿ ವಿಭಾಗಿಸಬಹುದು: ಸಾದಾ ಬಣ್ಣಗಳು, ಕ್ಷಾರವರ್ಣಗಳು, ಆಮ್ಲವರ್ಣಗಳು, ಗಂಧಕ ವರ್ಣಗಳು, ಬಾನೆವರ್ಣಗಳು, ಕ್ಷಾರಿಯ ವರ್ಣಗಳು, ಉತ್ಕರ್ಷಿತ ವರ್ಣಗಳು, ಪ್ರಸರಿತ ವರ್ಣಗಳು ಮತ್ತು ಪ್ರಕ್ರಿಯಾ ವರ್ಣಗಳು. ಒಂದೊಂದು ಗುಂಪಿನಲ್ಲಿಯೂ ನೂರಾರು ಬಣ್ಣಗಳಿರುವುವು. ಅವನ್ನು ತಯಾರಿಸುವ ವ್ಯಾಪಾರ ಸಂಸ್ಥೆಗಳು ಅವುಗಳಿಗೆ ವಿವಿಧ ವಾಣಿಜ್ಯ ನಾಮಗಳನ್ನು ಕೊಟ್ಟು ಮಾರಾಟಮಾಡುವರು. ಔಪಯೋಗಿಕ ವರ್ಣಗಳು ಸಾಮಾನ್ಯವಾಗಿ ಸ್ಥಿರವಾಗಿರುವುವು. ಮುಖ್ಯವಾಗಿ ಒಗೆತಕ್ಕೆ, ಬೆಳಕಿಗೆ, ಬೆವರಿಗೆ, ಚೆಲುವೆಗೆ ಬಣ್ಣ ಸ್ಥಿರವಾಗಿ ಇರಬೇಕು. ಬಣ್ಣ ಹಾಕುವಾಗ ಸರಿಯಾದ ಕ್ರಮವನ್ನು ಅನುಸರಿಸದಿದ್ದಲ್ಲಿ ಸ್ಥಿರತೆ, ಹೊಳಪು ಮತ್ತು ಸಮವರ್ಣಗಳಲ್ಲಿ ದೋಷವುಂಟಾಗಬಹುದು. ವಸ್ತ್ರದ ಶಕ್ತಿ, ಸ್ಪರ್ಶ ಮತ್ತು ಪ್ರಭೆ(ಕಾಂತಿ, ಹೊಳಪು) ಮುಂತಾದವುಗಳಿಗೆ ಕುಂದಾಗಬಹುದು.
ಬಣ್ಣ ಹಾಕುವಾಗ ಗಮನಿಸಬೇಕಾದ ಕೆಲ ಅಂಶಗಳು: ನೂಲು ಅಥವಾ ವಸ್ತ್ರಗಳಲ್ಲಿರುವ ಕಲ್ಮಶಗಳನ್ನು (ಮುಖ್ಯವಾಗಿ ಜಿಡ್ಡು ಪದಾರ್ಥಗಳನ್ನು) ತೆಗೆದು ಶುಭ್ರಪಡಿಸಬೇಕು. ಬಣ್ಣ ಮತ್ತು ಅದರ ಜೊತೆಯಲ್ಲಿ ಉಪಯೋಗಿಸುವ ರಾಸಾಯನಿಕ ವಸ್ತುಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗಿರಬೇಕು. ಉಪಯೋಗಿಸುವ ನೀರು ಮೃದುವಾಗಿರುವುದು ಅವಶ್ಯಕ. ಎಲ್ಲಾ ವಸ್ತುಗಳೂ ಸರಿಯಾದ ಪ್ರಮಾಣದಲ್ಲಿರಬೇಕು.  ಬಣ್ಣ ಹಾಕುವ ಸಮಯದಲ್ಲಿ ಎಳೆಗಳನ್ನು ದ್ರಾವಣದಲ್ಲಿ ತಿರುಗಿಸುವುದರಿಂದಾಗುವ ಕುಲುಕುವಿಕೆಯಿಂದ ಬಣ್ಣ ಸಮವಾಗಿ ಹತ್ತುವುದು. ಹಾಕುವ ರಸಾಯನ ವಸ್ತುಗಳ ತೂಕ, ಉಷ್ಣತೆ ಮತ್ತು ಬಣ್ಣದಲ್ಲಿ ಅದ್ದಿಡುವ ಕಾಲ ಇವನ್ನು ನಿಯತಕ್ರಮದಲ್ಲಿ ಅನುಸರಿಸಬೇಕು. ಒಂದೇ ಗುಂಪಿಗೆ ಸೇರಿದ ಬಣ್ಣಗಳನ್ನು ಬೆರೆಸಿ ಮಿಶ್ರವರ್ಣಗಳನ್ನು ಪಡೆಯಬಹುದು. ಒಂದು ಗುಂಪಿನ ಒಂದು ಬಣ್ಣವನ್ನು ಇನ್ನೊಂದು ಗುಂಪಿನ ಒಂದು ಬಣ್ಣದೊಡನೆ ಸಾಮಾನ್ಯವಾಗಿ ಮಿಶ್ರಮಾಡಬಾರದು. 
ವರ್ಣ ಮಿಶ್ರಣ : ಬಣ್ಣಗಳನ್ನು ಮಿಶ್ರಮಾಡಿ ವಿವಿಧ ವರ್ಣಗಳನ್ನು ಪಡೆಯಬಹುದು. ಇದಕ್ಕೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಪರಿಶುದ್ಧವಾದ ಕೆಂಪು ಹಳದಿ ಮತ್ತು ನೀಲಿ ಇವು ಮೂರೂ ಪ್ರಾಥಮಿಕ ವರ್ಣಗಳು(ಪ್ರೈಮರಿ ಕಲರ್ಸ್). ಎರಡು ಮೂಲ ವರ್ಣಗಳನ್ನು ಬೆರೆಸಿದರೆ ದ್ವಿತೀಯಕ ವರ್ಣಗಳು (ಸೆಕೆಂಡರಿ ಕಲರ್ಸ್) ದೊರೆಯುತ್ತವೆ. ಇವು ಹಸಿರು, ಊದ, ಮತ್ತು ಕಿತ್ತಳೆ. ಮೂರು ಪ್ರಾಥಮಿಕ ವರ್ಣಗಳ ಅಥವಾ ಎರಡು ದ್ವಿತೀಯಕ ವರ್ಣಗಳ ಸಂಮಿಶ್ರಣದಿಂದ ತೃತೀಯಕ ವರ್ಣಗಳು ಸಿಕ್ಕುತ್ತವೆ. ಇವು ಹಸಿರು, ಊದ ಮತ್ತು ಕಿತ್ತಳೆ. ಮೂರು ಪ್ರಾಥಮಿಕ ವರ್ಣಗಳ ಅಥವಾ ಎರಡು ದ್ವಿತೀಯಕ ವರ್ಣಗಳ ಸಂಮಿಶ್ರಣದಿಂದ ತೃತೀಯಕ ವರ್ಣಗಳು ಲಭಿಸುತ್ತವೆ. ಉದಾ: ಕಂದು, ಬೂದು, ಮತ್ತು ಪಾಚಿ. ಮೂರು ಪ್ರಾಥಮಿಕ ವರ್ಣಗಳ ಸಮ ಮಿಶ್ರಣ ಕಪ್ಪು ಬಣ್ಣವನ್ನು ಕೊಡುತ್ತವೆ.

ಪ್ರಾಥಮಿಕ ವರ್ಣ
ದ್ವಿತೀಯ ವರ್ಣ
ತೃತೀಯಕ ವರ್ಣ

   ಹಳದಿ                +      ಕೆಂಪು → ಕಿತ್ತಳೆ          }  ಕಂದು 
   ನೀಲಿ                 +     ಕೆಂಪು → ಊದು          } ...

   ಹಳದಿ                +     ನೀಲಿ →  ಹಸಿರು          }   ಬೂದು
   ಕೆಂಪು                +     ನೀಲಿ →   ಊದು         }      ...

   ನೀಲಿ                 +     ಹಳದಿ →  ಹಸಿರು          }  ಪಾಚಿ
   ಕೆಂಪು                +     ಹಳದಿ →  ಕಿತ್ತಳೆ            }  ...

ಬಣ್ಣ ಹಾಕಲು ಉಪಯೋಗಿಸುವ ಕೆಲವು ಯಂತ್ರೋಪಕರಣಗಳು: ಹತ್ತಿಯಿಂದ ತಯಾರಾದ ವಸ್ತ್ರಗಳಿಗೆ ಬಣ್ಣಹಾಕಲು ಜಿಗ್ಗರ್ ಎಂಬ ಯಂತ್ರವನ್ನು ಹೆಚ್ಚಾಗಿ ಉಪಯೋಗಿಸುವರು. ಈ ಯಂತ್ರದಲ್ಲಿ ನೂರಾರು ಮೀಟರ್ ಉದ್ದದ ವಸ್ತ್ರವನ್ನು ಒಂದು ದಿಂಡಿನ ಮೇಲೆ ಸುತ್ತಿರುತ್ತಾರೆ. ಈ ವಸ್ತ್ರ ಬಿಡಿಸಿಕೊಂಡಂತೆ ಅದು ಬಣ್ಣ ಮತ್ತು ಅನುಗುಣವಾದ ರಾಸಾಯನಿಕ ವಸ್ತುಗಳಿಂದ ಕೂಡಿದ ದ್ರಾವಣದ ಮೂಲಕ ಹಾಯ್ದು ಇನ್ನೊಂದು ದಿಂಡಿನ ಮೇಲೆ(ಮತ್ತೊಂದು ಕೊನೆಯಿಂದ) ಸುತ್ತಲ್ಪಡುವುದು. ಈ ದಿಂಡಿನಿಂದ ಮೊದಲ ದಿಂಡಿಗೂ ಮೊದಲ ದಿಂಡಿನಿಂದ ಎರಡನೆಯ ದಿಂಡಿಗೂ ಹೀಗೆಯೇ ಬಣ್ಣ ಪೂರ್ಣವಾಗಿ ಹತ್ತುವವರೆಗೂ ವಸ್ತ್ರ ಉದ್ದಿಷ್ಟಕಾಲ ಸುತ್ತುತ್ತಿರುತ್ತದೆ. 
ಒತ್ತು ಕೊಚ್ಚು ಯಂತ್ರ  (ಪ್ಯಾಡ್ಲಿಂಗ್ ಮ್ಯಾಂಗಲ್) : ಇದನ್ನು ಕೆಲವು ತರಹ ಹತ್ತಿ ಬಟ್ಟೆಗಳ ಮೇಲೆ ಬಣ್ಣ ಹಾಕಲು ಉಪಯೋಗಿಸುವರು. ಅಲ್ಲಿಯೂ ಕೆಲವು ತರಹದ ಬಣ್ಣಗಳನ್ನು ಮಾತ್ರ ಇದರಿಂದ ಬಣ್ಣ ಹಾಕಬಹುದಷ್ಟೆ.. ಈ ಯಂತ್ರದಲ್ಲಿ ಬಟ್ಟೆ ಬಣ್ಣದ ದ್ರಾವಣದ ಮುಖಾಂತರ ಎರಡು ದಿಂಡುಗಳ ಮಧ್ಯೆ ಹಾಯ್ದು ಹೋಗುವುದು. ದಿಂಡುಗಳ ಒತ್ತಡ ತಕ್ಕಷ್ಟು ಪ್ರಮಾಣದಲ್ಲಿದ್ದು ಒಂದೇ ಸಮವಾಗಿ ಬಣ್ಣದ ದ್ರಾವಣವನ್ನು ಹರಡುವುದು ಮತ್ತು ಹೆಚ್ಚಿನ ನೀರನ್ನು ಹಿಂಡಿ ತೆಗೆಯುವುದು. 
ಚಕ್ರಬಾನೆ ಯಂತ್ರ(ವಿಂಚ್ ಡೈಯ್ಯಿಂಗ್): ಇದನ್ನು ರೇಷ್ಮೆ ಮತ್ತು ಉಣ್ಣೆಯಿಂದ ತಯಾರಾದ ಬಟ್ಟೆಯ ಮೇಲೆ ಬಣ್ಣಹಾಕುವುದಕ್ಕೆ ಹೆಚ್ಚಾಗಿ ಉಪಯೋಗಿಸುವರು. ಇದರಲ್ಲಿ ವಸ್ತ್ರ ಎರಡು ದಿಂಡುಗಳ ಮೇಲೆ ಹಾಯ್ದು ಬಣ್ಣದ ದ್ರಾವಣ ತುಂಬಿದ ತೊಟ್ಟಿಯಲ್ಲಿ ಅದ್ದಲ್ಪಟ್ಟು ಸುಮಾರು ಒಂದು ಗಂಟೆಯ ಕಾಲ ಸುತ್ತು ಹಾಕುವುದು. ಅದೇ ಸಮಯದಲ್ಲಿ ಆವಿಯಿಂದ ಬಣ್ಣದ ದ್ರಾವಣ ಕಾಯಿಸಲ್ಪಡುವುದು. 
ವಿವಿಧ ಗುಂಪಿನ ಬಣ್ಣಗಳ ಗುಣ ಮತ್ತು ಉಪಯೋಗ :  ಸಾದಾ ಬಣ್ಣಗಳು : ಈ ಗುಂಪಿಗೆ ಸೇರಿದ ವರ್ಣಗಳಿಗೆ ಕ್ಲೊರಾನ್‍ಟಿನ್, ಕ್ಲೋರೋಸಾಲ್, ಡ್ಯೂರೋಸಾಲ್, ಅತುಲ್ ಡೈರೆಕ್ಟ್ ಮುಂತಾದ ವಾಣಿಜ್ಯ ನಾಮಗಳಿವೆ. ಸಾದಾ ಬಣ್ಣಗಳ ಗುಂಪಿನಲ್ಲಿ ಎಲ್ಲಾ ವರ್ಣಗಳೂ ಇವೆ. ಇವು ನೀರಿನಲ್ಲಿ ಕರಗುವುವು. ಒಗೆತಕ್ಕೆ ಹೆಚ್ಚಾಗಿ ಸ್ಥಿರವಾಗಿರುವುದಿಲ್ಲ. ಅನೇಕ ಬಣ್ಣಗಳು ಬೆಳಕಿಗೆ ಬಣ್ಣಗುಂದುವುವು. ಕೆಲವು ಮಾತ್ರ ಸ್ಥಿರವಾಗಿರುವುವು. ಈ ಬಣ್ಣಗಳನ್ನು ಸಸ್ಯವರ್ಗದ ಮತ್ತು ಪ್ರಾಣಿವರ್ಗದ ವಸ್ತ್ರಗಳ ಮೇಲೆ ಉಪಯೋಗಿಸಬಹುದು. ಇವು ಉಣ್ಣೆ ಮತ್ತು ರೇಷ್ಮೆಯ ಮೇಲೆ ಹೆಚ್ಚು ಸ್ಥಿರವಾಗಿರುವುವು. ಬಣ್ಣವನ್ನು ಸ್ವಲ್ಪ ತಣ್ಣೀರಿನಲ್ಲಿ ಸರಿಮಾಡಿ, ಬಿಸಿನೀರು ಹಾಕಿ, ಕರಗಿಸಿ ಉಪಯೋಗಿಸಬೇಕು. ಬಣ್ಣ ಮತ್ತು ರಾಸಾಯನಿಕ ವಸ್ತುಗಳನ್ನು ನೂಲು ಅಥವಾ ವಸ್ತ್ರದ ತೂಕಕ್ಕೆ ಅನುಗುಣವಾಗಿ ಉಪಯೋಗಮಾಡಬೇಕು. ಹತ್ತಿಯಿಂದ ತಯಾರಾದ ವಸ್ತುಗಳ ಮೇಲೆ ಹಾಕುವಾಗ ಪಾತ್ರೆ ಅಥವಾ ಯಂತ್ರದಲ್ಲಿ ತಕ್ಕ ಮೊತ್ತದಲ್ಲಿ ನೀರಿಗೆ ಬಣ್ಣ ಕದಡಿ, ಜೊತೆಗೆ 1%-2% ಟರ್ಕಿರೆಡ್ ಎಣ್ಣೆ ಅಥವಾ ಸೋಡಾ ಉಪ್ಪು ಉಪಯೋಗಿಸುವುದರಿಂದ ಒಂದೆಸಮವಾಗಿ ಬಣ್ಣ ಹತ್ತುವುದು. ಬೆಚ್ಚಗಾದ ಬಣ್ಣದ ದ್ರಾವಣದಲ್ಲಿ ನೂಲು ಅಥವಾ ವಸ್ತ್ರವನ್ನು ಅದ್ದಿ ಪ್ರಯೋಗಿಸುತ್ತಿರಬೇಕು. ಕುದಿಯುವ ಮಟ್ಟಕ್ಕೆ ಉಷ್ಣತೆಯನ್ನು ತಂದು 1/2 - 1 ಗಂಟೆಯ ನಂತರ ಉಪ್ಪನ್ನು ಕರಗಿಸಿ ಹಾಕುವುದರಿಂದ ಬಣ್ಣ ಸರಿಯಾಗಿಯೂ ಪೂರ್ತಿಯಾಗಿಯೂ ಹತ್ತುವುದು. ಬಣ್ಣ ಪೂರ್ತಿಹತ್ತಲು ಉಪ್ಪು ಸಹಾಯಕವಾಗುವುದು. ಬಣ್ಣ ಮಾಡಿದ ಅನಂತರ ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. 

ಸಾದಾ ಬಣ್ಣಗಳ ಸ್ಥಿರತೆಯನ್ನು ಹೆಚ್ಚಿಸಲು ಮುಂದೆ ಬರೆದಿರುವ ಕೆಲವು ರಾಸಾಯನಿಕ ವಸ್ತು ಪ್ರಯೋಗ ಅಥವಾ ಉತ್ತರ ಸಂಸ್ಕರಣ(ಆಫ್ಟರ್ ಟ್ರೀಟ್‍ಮೆಂಟ್) ಕೊಡಬಹುದು. ಇದರಿಂದ ಅನೇಕ ಬಣ್ಣಗಳ ಸ್ಥಿರತೆ ಹೆಚ್ಚುವುದು. 

ಬಣ್ಣ ಮಾಡಿದ ವಸ್ತುವನ್ನು 1/2%-2% ರಷ್ಟು ಮೈಲುತುತ್ತ ಮತ್ತು 1/2%-1% ಅಸಿಟಿಕ್ ಆಮ್ಲವಿರುವ ದ್ರಾವಣದಲ್ಲಿ 60º ಸೆಂ. ಉಷ್ಣತೆಯಲ್ಲಿ 20-30 ಮಿನಿಟುಗಳ ಕಾಲ ಸಂಸ್ಕರಿಸುವುದರಿಂದ ಕೆಲವು ಬಣ್ಣಗಳಲ್ಲಿ ಬೆಳಕಿಗೆ ಸ್ಥಿರತೆ ಹೆಚ್ಚುವುದು. 
ಇದೇ ರೀತಿಯಲ್ಲಿ 1%-2% ಬೈಕ್ರೋಮೇಟ್ 1/2%-1% ಅಸಿಟಿಕ್ ಆಮ್ಲವಿರುವ ದ್ರಾವಣದಲ್ಲಿ 90ºಸೆಂ. ಉಷ್ಣತೆಯಲ್ಲಿ 30 ಮಿನಿಟುಗಳು ಸಂಸ್ಕರಿಸುವುದರಿಂದ ಕೆಲವು ಬಣ್ಣಗಳ ಒಗೆತಕ್ಕೆ ಸ್ಥಿರತೆ ಹೆಚ್ಚುವುದು.

ಮೊದಲ ಮತ್ತು ಎರಡನೆಯ ಸಂಸ್ಕರಣಗಳಲ್ಲಿನ ರಾಸಾಯನ ವಸ್ತುಗಳೆರಡನ್ನು ಸೇರಿಸಿ ಅನಂತರ ಕ್ರಿಯೆಯನ್ನು ನಡೆಸಬಹುದು. ಈ ಕ್ರಿಯೆಯಿಂದ ಒಗೆತ, ತೊಳೆತ, ಬೆಳಕುಗಳಿಗೆ ಸ್ಥಿರತೆ ಹೆಚ್ಚಿಸಬಹುದು. 1/2%-3% ಮೈಲುತುತ್ತ, 1%-2% ಬೈಕ್ರೋಮೇಟ್ ಮತ್ತು 1/2%-1% ಅಸೆಟಿಕ್ ಆಮ್ಲ (30% ಸಾರವಾದದ್ದು) ಇರುವ ದ್ರಾವಣದಲ್ಲಿ 15-20 ಮಿನಿಟುಗಳ ಕಾಲ 60º ಸೆಂ. ಉಷ್ಣತೆಯಲ್ಲಿ ಸಂಸ್ಕರಿಸಿ ಅನಂತರ ಹಿಂಡಿ ತೊಳೆದು ಒಣಗಿಸುವುದು.

2%-3% ರಷ್ಟು ಕ್ರೋಮಿಯಂ ಅಸಿಟೇಟ್ ದ್ರಾವಣದಲ್ಲಿ 30 ಮಿನಿಟುಗಳ ಕಾಲ 90º-95º  ಸೆಂ. ಉಷ್ಣತೆಯಲ್ಲಿ ಸಂಸ್ಕರಿಸುವುದರಿಂದ ತೊಳೆತ, ಒಗೆತ, ಕ್ಲೇದಮರ್ದನ (ವೆಟ್ ಪ್ರೋಸೆಸಿಂಗ್) ಮತ್ತು ಬೆವರಿಗೆ ಸ್ಥಿರತೆ ಹೆಚ್ಚುವುದು.
2%-3%ರಷ್ಟು ಫಾರ್ಮಾಲ್ಡಿಹೈಡ್ ದ್ರಾವಣದಲ್ಲಿ (40% ಸಾರವಾದದ್ದು) 30 ಮಿನಿಟುಗಳ ಕಾಲ 50º ಸೆಂ. ಉಷ್ಣತೆಯಲ್ಲಿ ಸಂಸ್ಕರಿಸುವುದರಿಂದ ಕೆಲವು ಬಣ್ಣಗಳಲ್ಲಿ ಒಗೆತ, ತೊಳೆತಗಳಿಗೆ ಸ್ಥಿರತೆ ಹೆಚ್ಚುವುದು. ಇದನ್ನು ಮುಖ್ಯವಾಗಿ ಕಪ್ಪು ಬಣ್ಣಗಳಿಗೆ ಉಪಯೋಗಿಸುವರು.

ಸಾದಾ ಬಣ್ಣಗಳು ಕ್ಷಾರವರ್ಣಗಳಿಗೆ ವರ್ಣಬಂಧಕಗಳಂತೆ(ಮಾರ್ಡೆಂಟ್ಸ್) ವರ್ತಿಸುವುವು. ಆದ್ದರಿಂದ ಬಣ್ಣಗಳ ಹೊಳಪು ಹೆಚ್ಚಲು ಕ್ಷಾರವರ್ಣಗಳಿಂದ ಉಪವರ್ಣೀಕರಣ ಮಾಡುತ್ತಾರೆ. ಇದರಿಂದ ಬಣ್ಣ ಪೂರ್ಣಗೊಳ್ಳುವುದೇ ಅಲ್ಲದೆ ಬಣ್ಣದ ಛಾಯೆ ಸಹ ಮಾರ್ಪಡುವುದು. 1/4%-1/2%ದಷ್ಟು ಕ್ಷಾರ ವರ್ಣ 1%-2% ರಷ್ಟು ಅಸೆಟಿಕ್ ಆಮ್ಲ ಇರುವ ಪಾತ್ರೆಯಲ್ಲಿ (ಆಮ್ಲ 30% ಸಾರವಾದದ್ದು) ಬಣ್ಣಹಾಕಿದ ಎಳೆಗಳನ್ನು 10-15 ಮಿನಿಟುಗಳ ಕಾಲ ಮೊದಲು ದೇಹೋಷ್ಣತೆಯಲ್ಲಿ ಸಂಸ್ಕರಿಸಿ ಅನಂತರ ಕ್ರಮವಾಗಿ ಕುದಿಯುವ ಉಷ್ಣತೆಗೆ ಏರಿಸಿ ಅದರಲ್ಲಿ ಸಂಸ್ಕರಿಸುವರು.

ಕೆಲವು ಬಣ್ಣಗಳನ್ನು ಡೈಅಜೊಟೈಸ್ಡ್ ದ್ರಾವಣದಲ್ಲಿ ಅಂದರೆ ಸೋಡಿಯಂ ನೈಟ್ರೇಟ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲಗಳನ್ನು ಕರಗಿಸಿದ ದ್ರಾವಣದಲ್ಲಿ ದೇಹೋಷ್ಣತೆಯಲ್ಲಿ ಕೆಲವು ಮಿನಿಟುಗಳ ಕಾಲ ಬಣ್ಣಮಾಡಿದ ವಸ್ತುವನ್ನು ಸಂಸ್ಕರಿಸಿದ ತರುವಾಯ β ನ್ಯಾಫ್ತಾಲ್ ಕರಗಿಸಿದ ದ್ರಾವಣದಲ್ಲಿ ಸಂಸ್ಕರಿಸುವುದರಿಂದ ಒಗೆತಕ್ಕೆ ಸ್ಥಿರತೆ ಹೆಚ್ಚುವುದು. β ನ್ಯಾಫ್ತಾಲ್ ಅಲ್ಲದೆ ವರ್ಣೋತ್ಕರ್ಷಣೆಗೆ ರಿಸಾರ್ಸಿನಾಲ್, ಫೀನಾಲ್, ಚಲುವೆ ದ್ರಾವಣ ಉತ್ಕರ್ಷಕಗಳನ್ನು ಸಹ ಉಪಯೋಗಿಸಬಹುದು. ಸಾದಾ ಬಣ್ಣಗಳು ಉಣ್ಣೆ ಮತ್ತು ರೇಷ್ಮೆ ಮೇಲೆ ಹೆಚ್ಚು ಸ್ಥಿರವಾಗಿರುತ್ತದೆ. ಸಾದಾ ಬಣ್ಣವನ್ನು ಕರಗಿಸಿ ಅದರೊಡನೆ 1%-2%ರಷ್ಟು ಅಸೆಟಿಕ್ ಆಮ್ಲ ಮತ್ತು 10%-20% ಗ್ಲಾಬರ್ಸ್ ಉಪ್ಪು (ಓಚಿ2Sಔ4) ಬೆರೆಸಿ 60º  ಉಷ್ಣತೆಯಲ್ಲಿ ನೂಲು ಅಥವಾ ವಸ್ತುವನ್ನು ಅದ್ದಿ ಸಂಸ್ಕರಿಸುತ್ತ, ಕುದಿಯುವ ಉಷ್ಣತೆಯವರೆಗೆ ಕಾವೇರಿಸಿ 1/2 ಗಂಟೆಯವರೆಗೆ ಬಣ್ಣ ಮಾಡಬೇಕು.

	ಕ್ಷಾರವರ್ಣಗಳು(ಬೇಸಿಕ್ ಕಲರ್ಸ್) : ಇವು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಹೆಚ್ಚು ಉಜ್ವಲ ಬಣ್ಣಗಳಿವು. ಒಗೆಯುವುದಕ್ಕೆ ಹೆಚ್ಚು ಸ್ಥಿರವಾಗಿ ಇರುವುದಿಲ್ಲ. ಬೆಳಕಿಗೆ ಬಣ್ಣ ಕುಂದುವುವು. ಹತ್ತಿಯ ಮೇಲೆ ನೇರವಾಗಿ ಬಣ್ಣ ಹಿಡಿಯುವುದಿಲ್ಲ. ವರ್ಣೋತ್ಕರ್ಷಕ ರಾಸಾಯನಿಕ ವಸ್ತುಗಳ ಸಹಾಯದಿಂದ ಹತ್ತಿಯ ಮೇಲೆ ಹಾಕಬಹುದು. ಬಣ್ಣಹಾಕುವ ವಿಧಗಳು ಈ ಕೆಳಗಿನಂತಿವೆ: (1)ಟರ್ಕಿ ರೆಡ್ ಎಣ್ಣೆ ವರ್ಣೋತ್ಕರ್ಷಕ (2) ಸ್ಫಟಿಕ ಮತ್ತು ಸೋಡ ಉಪ್ಪು ವರ್ಣೋತ್ಕರ್ಷಕ (3)ಟ್ಯಾನಿನ್ ಅಳಲೇಕಾಯ ವರ್ಣೋತ್ಕರ್ಷಕ, (4) ಕೆಟನಾಲ್ ವರ್ಣೋತ್ಕರ್ಷಕ. ಇವುಗಳಲ್ಲಿ ಮುಖ್ಯವಾದ ವರ್ಣೋತ್ಕರ್ಷಕ ಅಳಲೇಕಾಯಿ. ಮೊದಲು ಹತ್ತಿನೂಲು ಅಥವಾ ವಸ್ತ್ರವನ್ನು ಅಳಲೇ ಕಷಾಯದಲ್ಲಿ ವರ್ಣೋತ್ಕರ್ಷಣೆ ಮಾಡಿ ಅನಂತರ ಟಾರ್‍ಟರ್ ಎಮಿಟಿಕ್ ನೀರಿನಲ್ಲಿ ಸಂಸ್ಕರಿಸಬೇಕು. ಇದಾದಮೇಲೆ ಕ್ಷಾರವರ್ಣದ ದ್ರಾವಣದಲ್ಲಿ ಸಂಸ್ಕರಿಸಬೇಕು. ಇದರಿಂದ ಹತ್ತಿಯ ಮೇಲೆ ಬಣ್ಣಬರುವುದು. ಕ್ಷಾರವರ್ಣಗಳನ್ನು ಹತ್ತಿಯ ಮೇಲೆ ಹೆಚ್ಚಾಗಿ ಉಪಯೋಗಿಸುವುದಿಲ್ಲ. ರೇಷ್ಮೆಯ ಮೇಲೆ ನೇರವಾಗಿ ಹಾಕಬಹುದು. ಬಣ್ಣದ ಜೊತೆಯಲ್ಲಿ 1% ಅಸೆಟಿಕ್ ಆಮ್ಲ ಹಾಕಿ 80º -90º ಸೆಂ. ಉಷ್ಣತೆಯಲ್ಲಿ 1/2 ಗಂಟೆ ಬಣ್ಣ ಮಾಡಬೇಕು. ಇದೇ ರೀತಿಯಲ್ಲಿ ಉಣ್ಣೆಯ ಮೇಲೆಯೂ ಬಣ್ಣ ಮಾಡಬಹುದು. ಆದರೆ ಈ ಬಣ್ಣಗಳನ್ನು ಉಣ್ಣೆಯ ಮೇಲೆ ಉಪಯೋಗಿಸುವುದು ಬಹಳ ಕಡಿಮೆ.

	ಆಮ್ಲ ವರ್ಣಗಳು : ಆಮ್ಲ ವರ್ಣಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಇವು ಹತ್ತಿ ಮತ್ತು ಕೃತಕ ರೇಷ್ಮೆಗಳ ಮೇಲೆ ಹತ್ತುವುದಿಲ್ಲವಾದ್ದರಿಂದ ಅಲ್ಲಿ ಇವನ್ನು ಉಪಯೋಗಿಸುವುದಿಲ್ಲ. ಉಣ್ಣೆ, ರೇಷ್ಮೆ ಮತ್ತು ನೈಲಾನ್‍ಗಳ ಮೇಲೆ ವಿಶೇಷವಾಗಿ ಉಪಯೋಗಿಸುವರು. ಸಾಮಾನ್ಯ ಸ್ಥಿರತೆಯಿಂದ ಅತಿ ಹೆಚ್ಚಿನ ಸ್ಥಿರತೆಯುಳ್ಳ ಬಣ್ಣಗಳೂ ಇವೆ. ಆಮ್ಲವರ್ಣಗಳನ್ನು ಚೆನ್ನಾಗಿ ಕರಗಿಸಿ, ಕರಗಿಸಿದ ಗ್ಲಾಬರ್ಸ್ ಉಪ್ಪನ್ನು ಸ್ವಲ್ಪ ಮಿಶ್ರಮಾಡಿ ಬಿಸಿಯಾಗಿರುವಾಗ ರೇಷ್ಮೆ ಅಥವಾ ಉಣ್ಣೆಯನ್ನು ಅದರಲ್ಲಿ ಸಂಸ್ಕರಿಸಬೇಕು. ಅನಂತರ ಕುದಿಯುವ ವರೆಗೆ ಉಷ್ಣತೆಯನ್ನು ಏರಿಸಿ ಸಲ್ಫ್ಯೂರಿಕ್ ಅಥವಾ ಫಾರ್ಮಿಕ್ ಅಥವಾ ಅಸೆಟಿಕ್ ಆಮ್ಲವನ್ನು (1%-1/4%) ಹಾಕಿ 1/2ಗಂಟೆಯ ಕಾಲ ಸಂಸ್ಕರಿಸಿದ ಮೇಲೆ ತೆಗೆದು ಚೆನ್ನಾಗಿ ತೊಳೆಯಬೇಕು.

	ಆಮ್ಲವರ್ಣಗಳ ಕೆಲವು ವಾಣಿಜ್ಯನಾಮಗಳು ಹೀಗಿವೆ: ಫ್ರೆಂಚ್ ಡೈಸ್ ಅಂಡ್ ಕೆಮಿಕಲ್ಸ್ ಕಂಪನಿ-ಬ್ರಿಲಿಯಂಟ್ ಮಿಲ್ಲಿಂಗ್, ಆಸಿಡ್ ಬ್ರಿಲಿಯಂಟ್, ಬ್ರಿಲಿಯಂಟ್ ಫಾಸ್ಟ್ ಸಯನೈಡ್, ಕೂಮ್ಮಾಸ್ಸಿಮಿಲ್ಲಿಂಗ್, ಇತ್ಯಾದಿ. ಸಿಬಾ ಕಂಪನಿ- ನಿಯಲಾನ್, ಕ್ವಿಲಾನ್, ಫುಲ್ಲಾಸಿನ್, ಬ್ರಿಲಿಯಂಟ್ ಅಲಿಸರಿನ್ ಫಾಸ್ಟ್, ಅಲಿಸರಿನ್ ಸುಪೀರಿಯರ್, ನ್ಯಾವಿ, ಸ್ಯಾಂಡೋಜ್ ಕಂಪನಿ-ಸಲ್ಫೋನೈನ್, ತ್ಸಲೈನ್‍ಮಿಲ್ಲಿಂಗ್, ಸಿಟ್ರನೈನ್, ಇಂಪಿರಿಯಲ್ ಕೆಮಿಕಲ್ ಇಂಡಸ್ಟ್ರೀಸ್-ಕ್ವಿನಾಲಿನ್, ಲಿಸಾಮಿನ್ ಫಾಸ್ಟ್, ತೂಮ್ಮಾಸ್ಸಿ, ನಾಫ್ತಲಿನ್.

ಗಂಧಕ ವರ್ಣಗಳು : ಇವು ನೀರಿನಲ್ಲಿ ಕರಗುವುದಿಲ್ಲ. ಹಾಗೂ ಮಂದ ಛಾಯೆಯವು. ಸಾಮಾನ್ಯವಾಗಿ ಇವು ಸ್ಥಿರವರ್ಣಗಳು. ಹತ್ತಿಯ ಮೇಲೆ ಇವನ್ನು ಉಪಯೋಗಿಸಬಹುದು. ರೇಷ್ಮೆ ಮತ್ತು ಉಣ್ಣೆಯ ಮೇಲೆ ಉಪಯೋಗಿಸಲಾಗುವುದಿಲ್ಲ. ಇವನ್ನು ಸೋಡಿಯಂ ಸಲ್ಫೈಡ್ ಮತ್ತು ಸೋಡಿಯಂ ಕಾರ್ಬೊನೇಟ್ ಸಹಾಯದಿಂದ ಬಿಸಿನೀರಿನಲ್ಲಿ ಕರಗಿಸಬೇಕು. ಹತ್ತಿಯ ಮೇಲೆ 1/2ಗಂಟೆಯ ಕಾಲ ಕುದಿಯುವ ಉಷ್ಣತೆಯಲ್ಲಿ ಬಣ್ಣಮಾಡಿ ಉಪ್ಪು(10%-20%) ಹಾಕಿ ಮತ್ತೆ 1/2 ಗಂಟೆಯ ಕಾಲ ಸಂಸ್ಕರಿಸಬೇಕು. ಬಣ್ಣಮಾಡಿದ ಅನಂತರ ಕೆಲವು ರಾಸಾಯನಿಕ ವಸ್ತುಸಂಸ್ಕರಣ ಮಾಡುವುದೂ ಉಂಟು. ಅಂಥ ಉತ್ತರ ಕ್ರಿಯೆಗಳು ಹೀಗಿವೆ: (1)1%-3% ಬೈಕ್ರೊಮೇಟ್, 1%-3% ಅಸೆಟಿಕ್ ಆಮ್ಲ., 1%-3% ಮೈಲುತುತ್ತ, 60º ಸೆಂ. ಉಷ್ಣತೆಯಲ್ಲಿ 1/2 ಗಂಟೆ ಸಂಸ್ಕರಣೆಯಿಂದ ಸ್ಥಿರತೆ ಹೆಚ್ಚುವುದು. (2) 1%-3% ಬೈಕ್ರೊಮೇಟ್, 1%-3% ಅಸೆಟಿಕ್ ಆಮ್ಲ(30% ಸಾರವಾದದ್ದು) ಇರುವ ದ್ರಾವಣದಲ್ಲಿ 20 ಮಿನಿಟುಗಳು 60º 70º ಸೆಂ. ಉಷ್ಣತೆಯಲ್ಲಿ ಸಂಸ್ಕರಿಸುವುದರಿಂದ ತೊಳೆತಕ್ಕೆ ಹಾಗೂ ಗುಣಿತವರ್ಣಗಳ (ಕ್ರಾಸ್ ಡೈಯಿಂಗ್) ಸ್ಥಿರತೆ ಉತ್ತಮಗೊಳ್ಳುವುದು. ಅಲ್ಲದೆ ಬಣ್ಣ ಹಾಕಿ ಎಳೆಗಳನ್ನು ಸಂಸ್ಕರಿಸಿದರೆ ತೀವ್ರವಾಗಿ ಅಮ್ಲಜನಕೋತ್ಕರ್ಷಣೆ ಆಗುವುದು. ಇದರಿಂದಾಗಿ ಪ್ರಬಲ ಕ್ಷಾರದ ಉಪಯೋಗದಿಂದಾಗುವ ದಾರದ ನಿಶ್ಯಕ್ತತೆ ತಡೆಯಲ್ಪಟ್ಟು ಪೂರ್ಣವಾಗಿ ಕ್ಷಾರ ತಟಸ್ಥಗೊಳಿಸಲ್ಪಡುವುದು. ಮುಖ್ಯವಾಗಿ ಕಪ್ಪುಬಣ್ಣದ ಪ್ರಯೋಗದಿಂದಾಗುವ ದಾರದ ಶಕ್ತಿಹೀನತೆಯ ನಿವಾರಣೆ ಆಗುತ್ತದೆ. ಸಂಸ್ಕರಣಾನಂತರ ತೊಳೆವ ಮುನ್ನ ಸೋಡಾ ಉಪ್ಪಿನ ದ್ರಾವಣದಲ್ಲಿ ತೊಳೆದು ಸಂಸ್ಕರಿಸಬೇಕು.

	ಆಮ್ಲಜನಕೋತ್ಕರ್ಷಣ : ಬಣ್ಣಹಾಕಿದ ಎಳೆಗಳನ್ನು ಸೋಡಿಯಂಪರ್ಬೋರೇಟ್ 1%-2%ರಷ್ಟು ಅಥವಾ 2 ಘನಗಾತ್ರ ಹೈಡ್ರೋಜನ್ ಪೆರಾಕ್ಸೈಡ್ ಅಥವಾ ಸೋಡಿಯಂ ಪೆರಾಕ್ಸೈಡ್ ದ್ರಾವಣದಲ್ಲಿ 30 ಮಿನಿಟುಗಳು ದೇಹೋಷ್ಣತೆಯಲ್ಲಿ ಸಂಸ್ಕರಿಸಿದರೆ ಆಮ್ಲಜನಕೋತ್ಕರ್ಷಣೆಯಾಗಿ ಹೊಳಪು ಹೆಚ್ಚುವುದು.

	ತೈಲೀಕರಣ : ಗಂಧಕ ಕಪ್ಪು ಬಣ್ಣಗಳ ಘನತೆ. ಛಾಯಾಸೌಂದರ್ಯಗಳನ್ನು ಹೆಚ್ಚಿಸಿ ಒರಟುತನವನ್ನು ಹೋಗಲಾಡಿಸಲು 10 ಗ್ಯಾಲನ್ ನೀರಿಗೆ 5-7 1/2 ತೊಲ ಅಮೋನಿಯ ಮತ್ತು 8-12 ತೊಲ ಟರ್ಕಿ ರೆಡ್ ಎಣ್ಣೆ ಇಲ್ಲವೆ ಎರಡನೆಯ ರೀತಿಯಲ್ಲಿ 8-12 ತೊಲ ಸಾಬೂನು 4-8 ತೊಲ ಆಲಿವ್ ಎಣ್ಣೆ ಅಥವಾ ಕಡಲೇಕಾಯಿ ಎಣ್ಣೆ ಅಥವಾ ಎಳ್ಳೆಣ್ಣೆ ಮತ್ತು 2-3 ತೊಲ ಸೋಡಾ ಉಪ್ಪು ಇರುವ ದ್ರಾವಣದಲ್ಲಿ 15 ಮಿನಿಟು ಉಗುರು ಬೆಚ್ಚಗಿರುವ ಉಷ್ಣತೆಯಲ್ಲಿ ಸಂಸ್ಕರಿಸಬೇಕು. ಸೋಡಾ ಉಪ್ಪು, ಸಾಬೂನುಗಳನ್ನು ಕುದಿವ ನೀರಲ್ಲಿ ಕರಗಿಸಿ, ಎಣ್ಣೆ ಹಾಕಿ ಕದಡಿ, ಈ ದ್ರಾವಣವನ್ನು ಪ್ರಯೋಗಕ್ಕೆ ಮುಂದೆ 10 ಮಿನಿಟುಗಳು ಕುದಿಸಬೇಕು.

ಕ್ಷಾರವರ್ಣದಿಂದ ಉಪರಿವರ್ಣೀಕರಣ : ಗಂಧಕ ವರ್ಣಗಳೂ ಕ್ಷಾರವರ್ಣಗಳಿಗೆ ಉತ್ಕರ್ಷಕಗಳಾಗಿ ವರ್ತಿಸುವುದರಿಂದ ಗಂಧಕ ವರ್ಣಗಳ ಹೊಳಪನ್ನು ಹೆಚ್ಚಿಸಲು ಕ್ಷಾರವರ್ಣಗಳಿಂದ ಉಪರಿವರ್ಣ ಮಾಡುತ್ತಾರೆ. ಸಾಕµ್ಟು ಕ್ಷಾರವರ್ಣ, 2%-3%ರಷ್ಟು ಅಸೆಟಿಕ್ ಆಮ್ಲ (30%ರಷ್ಟು ಸಾರವಾದದ್ದು) ಇರುವ ದ್ರಾವಣದಲ್ಲಿ 10-15 ಮಿನಿಟುಗಳು ದೇಹೋಷ್ಣತೆಯಲ್ಲಿ ಸಂಸ್ಕರಿಸಿ ಕ್ರಮವಾಗಿ ಉಷ್ಣತೆಯನ್ನು 60º ಸೆಂ.ಗೆ ಏರಿಸುತ್ತ ಸಂಸ್ಕರಿಸಬೇಕು.
ಬಾನೆ ಬಣ್ಣಗಳು (ವಾಟ್ ಕಲರ್ಸ್) :  ಇವು ಬಟ್ಟೆಯ ಮೇಲೆ ಎಲ್ಲ ವಿಧದಲ್ಲಿಯೂ ಅತ್ಯಂತ ಸ್ಥಿರವಾದ ಬಣ್ಣವನ್ನು ಕೊಡುತ್ತವೆ. ಇವನ್ನು ಹತ್ತಿಯ ಮೇಲೆ ಹೆಚ್ಚಾಗಿ ಉಪಯೋಗಿಸುವರು. ರೇಷ್ಮೆಯ ಮೇಲೆ ಇವುಗಳ ಉಪಯೋಗ ವಿರಳ. ಉಣ್ಣೆಯ ಮೇಲೆ ಇಲ್ಲವೇ ಇಲ್ಲ. ಬಾನೆ ಬಣ್ಣಗಳಿಗೆ ಸೇರಿದ ವಿವಿಧ ತಯಾರಿಕೆಗಳ ಹೆಸರುಗಳು: ಇಂಡಾನ್‍ಥ್ರೀನುಗಳು, ಕ್ಯಾಲಡಾನುಗಳು, ಡ್ಯೂರಿನ್‍ಡಾನುಗಳು, ಸಿಬನಾನುಗಳು, ಇಂಡಿಗೊ, ನಾವಿನಾನ್ ಬಾನೆ ಬಣ್ಣಗಳು. ಈ ಬಣ್ಣಗಳು ನೀರಿನಲ್ಲಿ ಕರಗುವುದಿಲ್ಲ. ಸೋಡಿಯಂ ಹೈಡ್ರೊಸಲ್ಫೈಟ್ ಮತ್ತು ಸೋಡಿಯಂ ಹ್ರೈಡ್ರಾಕ್ಸೈಡ್ ಸಹಾಯದಿಂದ ಇವು ನೀರಿನಲ್ಲಿ ಕರಗುತ್ತವೆ. ಹೀಗೆ ಕರಗಿದ ಬಣ್ಣಗಳಿಗೆ(ಲ್ಯೂಕೋ) ವಿಲೀನಿತ ವಸ್ತುಗಳೆಂದು ಹೆಸರು. ಈ ವಸ್ತುಗಳು ಮೊದಲ ಬಣ್ಣದಿಂದ ಬೇರೆ ಬಣ್ಣ ಹೊಂದುವುವು. ಬಾನೆ ಬಣ್ಣಗಳನ್ನು ರಾಸಾಯನಿಕ ದೃಷ್ಟಿಯಿಂದ ಮೂರು ಗುಂಪಿಗೆ ಸೇರಿಸಬಹುದು: (1)ಇಂಡಿಗಾಯ್ಡ್, (2)ಆಂತ್ರಾಕ್ವಿನಾನ್, (3)ಸಲ್ಫುರೈಸ್ಡ್.

ಇಂಡಿಗಾಯ್ಡ್ ಬಣ್ಣ ಮಾಡುವ ವಿಧಾನ : ಹತ್ತಿಯ ತೂಕಕ್ಕೆ ಅನುಗುಣವಾಗಿ ಬಣ್ಣ ತೆಗೆದುಕೊಂಡು ರಾಸಾಯನಿಕ ವಸ್ತುಗಳನ್ನು ಸೇರಿಸಿ ಉಪಯೋಗಿಸಬೇಕು. 1 ಕೆಜಿ. ಇಂಡಿಗಾಯ್ಡ್ ಬಣ್ಣ 1/2-1 ಕೆ.ಜಿ ಟರ್ಕಿರೆಡ್ ಎಣ್ಣೆ, 25-150 ಲೀಟರ್ ಕಾಸ್ಟಿಕ್ ಸೋಡ, 25-150 ಲೀಟರ್ ಬಿಸಿನೀರು, 1-2 1/2 ಕೆಜಿ ಹೈಡ್ರೋಸಲ್ಫೈಟ್-ಈ ವಸ್ತುಗಳನ್ನು 10-20 ಮಿನಿಟುಗಳವರೆಗೆ 40º- 60ºಸೆಂ ಉಷ್ಣತೆಗೆ ತರುವುದರಿಂದ ಕರಗಿದ ವಿಲೀನಿತ ಸಂಯುಕ್ತ ದ್ರಾವಣ ದೊರೆಯುತ್ತದೆ. ಈ ದ್ರಾವಣದ ಬಣ್ಣ ಸಾಮಾನ್ಯವಾಗಿ ಹಳದಿ, ಕರಗಿದ ಈ ಬಣ್ಣವನ್ನು ತಕ್ಕಷ್ಟು ಬಿಸಿ ನೀರಿನಲ್ಲಿ ಕದಡಿ, ಹತ್ತಿಯ ಮೇಲೆ 1/2 ಗಂಟೆ ಸಂಸ್ಕರಿಸಬೇಕು. ಅನಂತರ ಚೆನ್ನಾಗಿ ಹಿಂಡಿ, 

1ನೆಯ ವಿಧ
2ನೆಯ ವಿಧ
3ನೆಯ ವಿಧ

1.ಬಾನೆ ಬಣ್ಣ

2.ಟರ್ಕಿರೆಡ್ ಎಣ್ಣೆ-       ಸಮಭಾಗ

3.ಕಾಸ್ಟಿಕ್ ಸೋಡ 66ºಖಿW ಸಿಸಿ/ಲೀಟರ್ 
 ಖಿ W  ಸಿಸಿ/ಲೀಟರ್

4.ಹೈಡ್ರೋಸ್ + ಗ್ರಾಂ/ಲೀಟರ್

5.ಉಪ್ಪು + ಗ್ರಾಂ/ಲೀಟರ್

6.ಬಣ್ಣಮಾಡುವ ಉಷ್ಣತೆ

7.ಕಾಲ 
1%

 -

12

1-

1.5

--

50ಲಿ-60ಲಿ ಸೆಂ

¾ ಗಂಟೆ
1%-2%

  -

16

1.5-2.5

--

--
1%

-

4

1-1.15

5-10

40ಲಿ-50ಲಿ ಸೆಂ

¾ ಗಂಟೆ
1%-2%

--

6

1.5-2.5

10-20

--
1%-2%

--

4-6

1-1.5

5-10

25ಲಿ-30ಲಿ ಸೆಂ

¾ ಗಂಟೆ

ಕೆಲವು ಮಿನಿಟು ಗಾಳಿಯಲ್ಲಿ ಹರಡುವುದರಿಂದ ಮೊದಲಿನ ಬಣ್ಣ ಬರುವುದು. ಕೊನೆಯದಾಗಿ ಚೆನ್ನಾಗಿ ತೊಳೆದು, ಕುದಿಯುವ ಸಾಬೂನಿನ ನೀರಿನಲ್ಲಿ ಕೆಲವು ಮಿನಿಟು ಸಂಸ್ಕರಿಸಬೇಕು.
1.ಬಾನೆ ಬಣ್ಣ

2.ಟರ್ಕಿರೆಡ್ ಎಣ್ಣೆ-       ಸಮಭಾಗ

3.ಕಾಸ್ಟಿಕ್ ಸೋಡ 66ºಖಿW  
   ಸಿಸಿ/ಲೀಟರ್

4.ಹೈಡ್ರೋಸ್ + ಗ್ರಾಂ/ಲೀಟರ್

5.ಉಪ್ಪು + ಗ್ರಾಂ/ಲೀಟರ್

6.ಬಣ್ಣಮಾಡುವ ಉಷ್ಣತೆ

7.ಕಾಲ 
1%

 -

12

1-1.5
--

50º-60º ಸೆಂ

3/4 ಗಂಟೆ
1%-2%

  -

16

1.5-2.5
--

--
1%

-

4

1-1.15
5-10

40º-50º ಸೆಂ

3/4 ಗಂಟೆ
1%-2%

--

6

1.5-2.5
10-20

--
1%-2%

--

4-6

1-1.5
5-10

25º-30º ಸೆಂ

1 ಗಂಟೆ

ಆಂತ್ರಾಕ್ವಿನಾನ್ ಬಣ್ಣ ಮಾಡುವ ವಿಧಾನ : ಬಣ್ಣವನ್ನು ಹತ್ತಿಯ ತೂಕಕ್ಕೆ ಅನುಗುಣವಾಗಿ ತೆಗೆದುಕೊಳ್ಳಬೇಕು. ಆದರೆ ಇತರ ರಾಸಾಯನಿಕ ವಸ್ತುಗಳನ್ನು ನೀರಿನ ಅಳತೆಯನ್ನು ಅನುಸರಿಸಿ ಸೇರಿಸಬೇಕು. ಮತ್ತು ಬಣ್ಣಮಾಡಲು ಉಪಯೋಗಿಸುವ ಯಂತ್ರಕ್ಕೆ ತಕ್ಕಂತೆ ನೀರು ಬೇಕಾಗುವುದು. ಸಾಮಾನ್ಯವಾಗಿ ಬಟ್ಟೆ ಮತ್ತು ನೀರಿನ ಪ್ರಮಾಣ ಸುಮಾರು 1 : 8 ರಿಂದ 1 : 20 ರವರೆಗಿರುವುದು. ಬಣ್ಣ ಮಾಡಿ ಮುಗಿಸುವ ಅಳತೆಗಳನ್ನು ಮುಂದಿನ ಯಾದಿಯಲ್ಲಿ ಬರೆದಿದೆ.
ಕ್ಷಾರೀಯ ವರ್ಣಗಳು : ಸಂಸ್ಕರಿಸುವುದಕ್ಕೆ ಮೊದಲು ಇವು ಬಣ್ಣಗಳಾಗಿರುವುದಿಲ್ಲ. ಎರಡು ರಾಸಾಯನಿಕ ವಸ್ತುಗಳು ಸೇರಿ ಬಣ್ಣವಾಗುತ್ತದೆ. ನ್ಯಾಫ್ತಾಲ್, ಸ್ಥಿರವರ್ಣಲವಣ ಮತ್ತು ಸ್ಥಿರವರ್ಣಕ್ಷಾರಗಳನ್ನು ಕರಗಿಸಿ ಮಿಶ್ರಮಾಡಿದರೆ ಬಣ್ಣ ಬರುವುದು. ಈ ಬಣ್ಣಗಳು ನೀರಿನಲ್ಲಿ ಕರಗುವುದಿಲ್ಲ. ಆದ್ದರಿಂದ ಇವನ್ನು ನೂಲು, ವಸ್ತುಗಳ ಮೇಲೆ ಸಂಯೋಜಿಸಬಹುದು. ಈ ಗುಂಪಿನ ಬಣ್ಣಗಳನ್ನು ಹತ್ತಿಯ ಮೇಲೆ ವಿಶೇಷವಾಗಿ ಉಪಯೋಗಿಸುತ್ತಾರೆ. ಇದರ ಮೇಲೆ ಗಟ್ಟಿಯಾಗಿಯೂ ಉಜ್ಜಲವಾಗಿಯೂ ಬಣ್ಣಬರುವುದು. ಈ ಗುಂಪಿನ ಬಣ್ಣಗಳ ವಾಣಿಜ್ಯನಾಮಗಳು ಹೀಗಿವೆ: ನ್ಯಾಫ್ತಾಲ್ಸ್, ಚ್ರಿಂಥಾಲ್ಸ್, ಸೀಬಾನ್ಯಾಫ್ತಾಲ್ಸ್ ಮತ್ತು ಅಮರ್ಥಾಲ್ಸ್.

ಬಣ್ಣ ಮಾಡುವ ಕ್ರಮ : ನೀರಿನಲ್ಲಿ ನ್ಯಾಫ್ತಾಲ್ ಕರಗುವುದಿಲ್ಲ. ಸೋಡಿಯಂ ಹೈಡ್ರಾಕ್ಸೈಡಿನ ಸಹಾಯದಿಂದ ಇದನ್ನು ಕರಗಿಸಬೇಕು. ಇದರಲ್ಲಿ ಹತ್ತಿಯ ನೂಲನ್ನು ಕೆಲವು ಮಿನಿಟು ಸಂಸ್ಕರಿಸಿದ ತರುವಾಯ ಚೆನ್ನಾಗಿ ಹಿಂಡಬೇಕು. ಬೇರೊಂದು ಪಾತ್ರೆಯಲ್ಲಿ ಸ್ಥಿರವರ್ಣಲವಣವನ್ನು ತಣ್ಣಗಿರುವ ನೀರಿನಲ್ಲಿ ಕರಗಿಸಿ ನ್ಯಾಫ್ತಾಲ್ ಮಾಡಿದ ನೂಲನ್ನು ಸಂಸ್ಕರಿಸಬೇಕು. ಒಡನೆಯೇ ಬಣ್ಣಬರುವುದು. ಸ್ಥಿರವರ್ಣಲವಣ ಸುಲಭವಾಗಿ ನೀರಿನಲ್ಲಿ ಕರಗುವುದು. ಇದರ ಬದಲು ಸ್ಥಿರ ವರ್ಣಾಕ್ಷರವನ್ನು ಉಪಯೋಗಿಸಬೇಕಾದರೆ ಇದನ್ನು ಮೊದಲು ಡೈಅಜೊಟೈಸ್ ಮಾಡಬೇಕು. ಸ್ಥಿರವರ್ಣಕ್ಷಾರಕ್ಕೆ ಸರಿಯಾದ ಪ್ರಮಾಣದಲ್ಲಿ ಹೈಡ್ರೊಕ್ಲೋರಿಕ್ ಆಮ್ಲ ಮತ್ತು ಸೋಡಿಯಂ ನೈಟ್ರೇಟ್ ಉಪ್ಪನ್ನು ಹಾಕಿದರೆ ಕೆಲವು ಮಿನಿಟುಗಳಲ್ಲಿ ಡೈಅಜೋಟೈಸ್ ಆಗುವುದು. ಅನಂತರ ತಕ್ಕಷ್ಟು ತಣ್ಣೀರನ್ನು ಹಾಕಿ ಅದರಲ್ಲಿ ನ್ಯಾಫ್ತಾಲ್ ಮಾಡಿದ ನೂಲನ್ನು ಸಂಸ್ಕರಿಸಿದರೆ ಕೂಡಲೇ ಬಣ್ಣಬರುವುದು.  ಇದೇ ರೀತಿಯ ಬಟ್ಟೆಯ ಮೇಲೆ ಮಾಡಲು ಪ್ಯಾಡಿಂಗ್ ಮ್ಯಾಂಗಲ್(ಒತ್ತು ಕೊಚ್ಚು) ಯಂತ್ರವನ್ನು ಉಪಯೋಗಿಸುವರು. ವಿವಿಧ ನ್ಯಾಫ್ತಾಲ್ ಮತ್ತು ಸ್ಥಿರವರ್ಣ ಲವಣಗಳ ಜೋಡಣೆಯಿಂದ ಬೇರೆ ಬೇರೆ ಬಣ್ಣಗಳನ್ನು ಪಡೆಯಬಹುದು. ಬಣ್ಣ ಮಾಡಿದ ಬಳಿಕ ಕುದಿಯುವ 0.5% ಸಾಬೂನಿನ ನೀರಿನಲ್ಲಿ ಕೆಲವು ಮಿನಿಟುಗಳ ಕಾಲ ಸಂಸ್ಕರಿಸುವುದರಿಂದ ಬಣ್ಣ ಹೆಚ್ಚು ಸ್ಥಿರವಾಗಿಯೂ ಉಜ್ವಲವಾಗಿಯೂ ಪರಿಣಮಿಸುವುದು.

ಉತ್ಕರ್ಷಿತ ವರ್ಣಗಳು : ಈ ಗುಂಪಿನ ಬಣ್ಣಗಳಿಂದ ಹತ್ತಿ ಮತ್ತು ರೇಷ್ಮೆಗಳ ಮೇಲೆ ಹೆಚ್ಚು ಉಪಯೋಗವಿಲ್ಲ. ಉಣ್ಣೆಯ ಮೇಲೆ ಸುಲಭವಾಗಿ ಹಾಕಬಹುದಾದ್ದರಿಂದಲೂ ಬಣ್ಣಗಳು ಹೆಚ್ಚು ಸ್ಥಿರತೆ ಪಡೆದಿರುವುದರಿಂದಲೂ ಇವನ್ನು ಅತ್ಯಂತ ಹೆಚ್ಚಾಗಿ ಉಪಯೋಗಿಸುವರು. ಉತ್ಕರ್ಷಕದ ಸಹಾಯದಿಂದ ಇವನ್ನು ಸಂಸ್ಕರಿಸಬೇಕು. ಇದಕ್ಕೆ ಸೋಡಿಯಂ ಅಥವಾ ಪೊಟಾಸಿಯಂ ಡೈಕ್ರೊಮೇಟ್ ಲವಣಗಳು ಉತ್ಕøಷ್ಟವಾದುವು. 

ಬಣ್ಣಹಾಕುವ ಮೂರು ವಿಧಾನಗಳು : (1)ಕ್ರೂಮ್ ಮಾರ್ಡೆಂಟ್ ಅತ್ಯುತ್ಕರ್ಷಣ ವಿಧಾನ. (2)ಆಫ್ಟರ್ ಕ್ರೋಂ ಮಾರ್ಡೆಂಟ್-ಉತ್ತರೋತ್ಕರ್ಷಣ (3)ಮೆಟಕ್ರೋಂ-ಮಾರ್ಡೆಂಟ್ ಸಮಕಾಲೋತ್ಕರ್ಷಣ. ಬಣ್ಣಕ್ಕೆ ತಕ್ಕ ವಿಧಾನವನ್ನು ಅನುಸರಿಸಬೇಕು. ಮೊದಲ ವಿಧಾನದಲ್ಲಿ ಉಣ್ಣೆಯನ್ನು ಉತ್ಕರ್ಷಣ ಮಾಡಿ ಅನಂತರ ಬಣ್ಣ ಹಾಕಬೇಕು.
ಉತ್ಕರ್ಷಣ ವಿಧಾನಗಳು : (1) ಉಣ್ಣೆಯನ್ನು 2%-4% ಬೈಕ್ರೋಮೇಟ್ ಕರಗಿಸಿದ ದ್ರಾವಣದಲ್ಲಿ 1-1 1/2 ಗಂಟೆಗಳ ಕಾಲ ಕುದಿಸುವುದು. (2)1%-3% ಬೈಕ್ರೊಮೇಟ್, 1/2 %-1% ಸಲ್ಫೂರಿಕ್ ಆಮ್ಲ ಅಥವಾ ಆಕ್ಸಾಲಿಕ್ ಆಮ್ಲ ಅಥವಾ ಫಾರ್ಮಿಕ್ ಆಮ್ಲದ ಜೊತೆಯಲ್ಲಿ ಕುದಿಸುವುದು. ಈ ರೀತಿ ಉತ್ಕರ್ಷಣ ಮಾಡಿದ ಉಣ್ಣೆಯನ್ನು ಬೇರೆ ಯಂತ್ರದಲ್ಲಿ ಬಣ್ಣ ಮತ್ತು 1-1 ಅಸಿಟಿಕ್ ಆಮ್ಲವಿರುವ ದ್ರಾವಣದಲ್ಲಿ 1-2 ಗಂಟೆಗಳ ಕಾಲ ಕುದಿಯುವ ಉಷ್ಣತೆಯಲ್ಲಿ ಬಣ್ಣ ಮಾಡಬೇಕು. ಉತ್ತರೋತ್ಕರ್ಷಣರೀತಿಯಲ್ಲಿ ಬಣ್ಣ ಮಾಡುವಾಗ ಮೊದಲು ಮೇಲೆ ಹೇಳಿದಂತೆ ಬಣ್ಣ ಮಾಡಿ ತರುವಾಯ ಬೇರೆ ಯಂತ್ರದಲ್ಲಿ ಹಿಂದೆ ಹೇಳಿದಂತೆ ಉತ್ಕರ್ಷಣ ಮಾಡಬೇಕು. ಸಮಕಾಲೋತ್ಕರ್ಷಣದ ವಿಧಾನದಲ್ಲಿ (ಬೈಕ್ರೋಮೇಟ್ + ಅಮೋನಿಯ) ಕ್ರೋಮೇಟ್ ಮತ್ತು ಅಮೋನಿಯಂ ಸಲ್ಫೇಟ್ ದ್ರಾವಣದಲ್ಲಿ ಕರಗಿಸಿದ ಬಳಿಕ ಬೇರೆಯಾಗಿ ಕರಗಿಸಿದ ಬಣ್ಣವನ್ನು ಅದರೊಡನೆ ಮಿಶ್ರಮಾಡಿ, 1-2 ಗಂಟೆಗಳ ಕಾಲ ಕುದಿಯುವ ಉಷ್ಣತೆಯಲ್ಲಿ ಬಣ್ಣ ಮಾಡಬೇಕು. ಬಣ್ಣ ಮಾಡಿದ ಮೇಲೆ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.
ಪ್ರಸರಿತ ವರ್ಣಗಳು : ಅಸಿಟೇಟ್ ಕೃತಕ ರೇಷ್ಮೆಯ ಮೇಲೆ ಇತರ ಸಾಮಾನ್ಯ ಬಣ್ಣಗಳ ಉಪಯೋಗ ಬಹಳ ಕಡಿಮೆ. ಆದ್ದರಿಂದ ಈ ಪ್ರಸರಿತ ವರ್ಣಗಳನ್ನು ಮುಖ್ಯವಾಗಿ ಅಸಿಟೇಟ್ ಕೃತಕ ರೇಷ್ಮೆಗೋಸ್ಕರವಾಗಿಯೇ ಕಂಡುಹಿಡಿದರೆನ್ನಬಹುದು. ಇವುಗಳಿಂದ ಬಣ್ಣ ಮಾಡುವುದು ಸುಲಭ. ಬೆಳಕಿಗೂ ಒಗೆತಕ್ಕೂ ಈ ಬಣ್ಣಗಳಿಗೆ ಸಾಮಾನ್ಯಮಟ್ಟದ ಸ್ಥಿರತೆ ಸಹ ಇರುತ್ತದೆ. ಇವನ್ನು ನೈಲಾನ್, ಟೆರಿಲೀನ್ ಮತ್ತು ಕೆಲವು ಕೃತಕ ರೇಷ್ಮೆಯ ಮೇಲೆ ಉಪಯೋಗಿಸಬಹುದು. ಈ ಗುಂಪಿಗೆ ಸೇರಿದ ಬಣ್ಣಗಳು: ಡಿಸ್ಪರ್ಸಾಲ್, ಡ್ಯೂರನಾಲ್, ಸೀಬಾಸೆಟ್, ಸೋಲಾಸೆಟ್ ಮುಂತಾದವು.

ಅಸಿಟೇಟ್ ಕೃತಕ ರೇಷ್ಮೆಯ ಮೇಲೆ ಬಣ್ಣ ಮಾಡುವ ಕ್ರಮ: 0.25% ಸಾಬೂನನ್ನು ಬಣ್ಣದ ತೊಟ್ಟಿಯಲ್ಲಿ ಕರಗಿಸಿದ ನೀರಿನೊಡನೆ, ಬಣ್ಣದ ದ್ರಾವಣ ಮಿಶ್ರಣವನ್ನೂ ಹಾಕಿ, 65º ಸೆಂ. ಉಷ್ಣತೆಗೆ ತಂದು ಅಸಿಟೇಟ್ ಕೃತಕ ರೇಷ್ಮೆಯನ್ನು ಇದರಲ್ಲಿ ಹಾಕಿ ಸಂಸ್ಕರಿಸಬೇಕು. ಅನಂತರ 15 ಮಿನಿಟುಗಳಲ್ಲಿ 80º ಸೆಂ ಗೆ. ಉಷ್ಣತೆಯನ್ನು ಏರಿಸಿ 1/2 -1 ಗಂಟೆಯ ಕಾಲ ಸಂಸ್ಕರಿಸಬೇಕು.

ಪ್ರಕ್ರಿಯಾ ವರ್ಣಗಳು : ಈ ಗುಂಪಿಗೆ ಸೇರಿದ ಬಣ್ಣಗಳು ಅತ್ಯಂತ ಹೊಸವು. ಇವು ಹತ್ತಿಯ ಮೇಲೆ ರಾಸಾಯನಿಕ ಪ್ರಕ್ರಿಯೆಯಿಂದ ಸಂಯೋಜನೆಯಾಗುತ್ತವೆ. ಹತ್ತಿಯ ಮೇಲೆ ಹೆಚ್ಚು ಸ್ಥಿರವಾಗಿಯೂ ಉಜ್ವಲವಾಗಿಯೂ ಇರುವುವು. ಬಣ್ಣಮಾಡುವುದು ಸುಲಭ. ಉಣ್ಣೆ ಮತ್ತು ರೇಷ್ಮೆಯ ಮೇಲೆ ಇವನ್ನು ಹೆಚ್ಚಾಗಿ ಉಪಯೋಗಿಸುವುದಿಲ್ಲ. ಈ ಬಣ್ಣಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಬಣ್ಣಕ್ಕೆ ಸ್ವಲ್ಪ ಬಿಸಿ ನೀರನ್ನು ಹಾಕಿ ಸರಿಮಾಡಿ ಅನಂತರ ಬಿಸಿ ನೀರನ್ನು ಸುರಿಯುತ್ತ ಕದಡುತ್ತ ಕರಗಿಸಬೇಕು. ಹತ್ತಿಯ ಮೇಲೆ ಉಪ್ಪು ಮತ್ತು ಸೋಡಿಯಂ ಕಾರ್ಬೊನೇಟ್ ಅಥವಾ ಸೋಡಿಯಂ ಹೈಡ್ರಾಕ್ಸೈಡ್ ಸಹಾಯದಿಂದ ಬಣ್ಣಮಾಡಬಹುದು. ಇನ್ನೂ ಕೆಲವಕ್ಕೆ ಉಷ್ಣ ಕೊಡಬೇಕು. ಬಣ್ಣ ಮಾಡಿದ ಮೇಲೆ ಚೆನ್ನಾಗಿ ತೊಳೆದು ಕುದಿಯುವ 0.5% ಸಾಬೂನಿನ ದ್ರಾವಣದಲ್ಲಿ 10-15 ಮಿನಿಟುಗಳ ಕಾಲ ಸಂಸ್ಕರಿಸಿ ಪುನಃ ತೊಳೆಯಬೇಕು. ಇದರಿಂದ ಸಂಯೋಜನೆ ಹೊಂದದ ಬಣ್ಣ ಕೊಚ್ಚಿಹೋಗಿ ಸ್ಥಿರ ವರ್ಣ ಮಾತ್ರ ಹತ್ತಿಯ ಮೇಲೆ ಉಳಿದುಕೊಳ್ಳುವುದು.                                                             
(ಬಿ.ಎಲ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ